ಫಿಲ್ಲೋಕ್ಸೀರಿಡೀ -
	ಹೆಮಿಪ್ಟರ (ಹೋಮಾಪ್ಟರ) ಗಣಕ್ಕೆ ಸೇರಿದ ಕೀಟ ಕುಟುಂಬ. ಏಫಿಡ್ಡುಗಳಿಗೆ ಹತ್ತಿರ ಸಂಬಂಧಿಗಳಾದ ಸುಮಾರು 30 ಪ್ರಭೇದಗಳ ಫಿಲ್ಮೋಕ್ಸೀರ ಕೀಟಗಳನ್ನು ಒಳಗೊಂಡಿದೆ. ಸೂಕ್ಷ್ಮಗಾತ್ರದ ಕೀಟಗಳಿವು. ಇವುಗಳ ದೇಹ ಮೃದುವಾಗಿದೆ. ಕೆಲವು ಪ್ರಭೇದಗಳಲ್ಲಿ ಮೈಮೇಲೆ ಮೇಣದಂಥ ವಸ್ತುವಿನ ಲೇಪ ಉಂಟು. ಮೈಬಣ್ಣ ಹಳದಿ, ಕಿತ್ತಳೆ, ಕೆಂಪು ಇತ್ಯಾದಿ. ಆಂಟೆನ್ನಗಳು ಮೂರು ಖಂಡಗಳಿಂದ ರಚಿತವಾಗಿವೆ. ಇವುಗಳ ಜೀವನಚರಿತ್ರೆ ಜಟಿಲವಾಗಿದ್ದು ಹಲವಾರು ರೂಪಭೇದಗಳನ್ನು ಒಳಗೊಂಡಿರುತ್ತದೆ. ಎಲ್ಲ ಕೀಟಗಳೂ ಅಂಡಜಗಳು.

	ಈ ಕುಟುಂಬದ ಅತಿಮುಖ್ಯ ಉದಾಹರಣೆ ದ್ರಾಕ್ಷಿಗಿಡಗಳಿಗೆ ತಗುಲಿ ಅಪಾರ ಹಾನಿಯುಂಟುಮಾಡುವ ಫಿಲ್ಲೋಕ್ಸೀರೆ (ಡ್ಯಾಕ್ಟೈಲೊಸ್ಫೀರ) ಪಿಟಿಫೋಲಿಯೈ ಎಂಬುದು. ದ್ರಾಕ್ಷಿಗಿಡಗಳ ಎಲೆ ಹಾಗೂ ಬೇರುಗಳಿಗೆ ಅಂಟುವ ಈ ಕೀಟ ಎರಡೂ ಅಂಗಗಳ ಮೇಲೆ ಗಂಟುಗಳನ್ನು ಉಂಟುಮಾಡುತ್ತದೆ.

	ಅಮೆರಿಕ, ಯೂರೋಪುಗಳಲ್ಲಿ ಇದರ ಹಾವಳಿ ಹೆಚ್ಚು. ಅಮೆರಿಕದ ದ್ರಾಕ್ಷಿಗಿಡಗಳಿಗಿಂತ ಯೂರೋಪಿನವು ಇದರ ದಾಳಿಗೆ ಹೆಚ್ಚು ತುತ್ತಾಗುವುವು. ಕೀಟಪೀಡಿತ ದ್ರಾಕ್ಷಿ ಬಳ್ಳಿಗಳ ಬೆಳೆವಣಿಗೆ ಕುಂಠಿತಗೊಳ್ಳುವುದಲ್ಲದೆ ಎಲೆಗಳ ಗಾತ್ರವೂ ಕಡಿಮೆಯಾಗಿ ಕ್ರಮೇಣ ಇಳುವರಿ ಕಡಿಮೆಯಾಗುವುದು. ಈ ಪಿಡುಗಿನಿಂದಾಗಿ ಲಕ್ಷಾಂತರ ಎಕರೆ ದ್ರಾಕ್ಷಿ ತೋಟಗಳು ಹಾಳಾಗಿವೆ. ಕೀಟನಿರೋಧಕ ಸಾಮಥ್ರ್ಯವುಳ್ಳ ಅಮೆರಿಕದ ದ್ರಾಕ್ಷಿಗಿಡಗಳನ್ನು ಕಸಿ ಮಾಡುವುದರಿಂದ ಉಳಿದ ಬಗೆಯವನ್ನು ರೋಗಮುಕ್ತವನ್ನಾಗಿಸಬಹುದು.
(ಎಚ್.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ